ಚೀಬೀ ಗಿಡ -
ಅಕ್ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಪೊದೆಸಸ್ಯ. ಚೀಬೀರ ಸೊಪ್ಪು ಪರ್ಯಾಯ ನಾಮ. ಪೆರಿಸ್ಟ್ರೋಫೆ ಬೈಕ್ಯಾಲಿಕ್ಯುಲೇಟ ಇದರ ಶಾಸ್ತ್ರೀಯ ಹೆಸರು. ಏಷ್ಯ ಹಾಗೂ ಆಫ್ರಿಕಗಳ ಉಷ್ಣ ಮತ್ತು ಉಪೋಷ್ಣ ವಲಯಗಳಲ್ಲೆಲ್ಲ ಇದರ ವ್ಯಾಪ್ರಿ ಉಂಟು. ಭಾರತದಲ್ಲಿ ಎಲ್ಲ ಕಡೆಯಲ್ಲೂ ಕಂಡುಬರುತ್ತದೆ. 60-180 ಛಿm  ಎತ್ತರಕ್ಕೆ ಬೆಳೆಯುವ ಗಿಡ ಇದು. ಎಲೆ ಸರಳ ಮಾದರಿಯವು ; ಅಭಿಮುಖ ಬಗೆಯಲ್ಲಿ ಜೋಡಣೆಗೊಂಡಿವೆ. ಆಕಾರ ಅಂಡದಂತೆ. ಹೂಗಳೂ ಗುಲಾಬಿ, ನೇರಿಳೆ ಇಲ್ಲವೆ ಉದಾ ಬಣ್ಣದವು. ಪ್ಯಾನಿಕಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಫಲ ಸಂಪುಟ ರೀತಿಯದು.

ಚೀಬೀ ಗಿಡವನ್ನು ಬೀಜದಿಂದ ವೃದ್ಧಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದರ ಸೊಪ್ಪನ್ನು ಕುದುರೆಗಳ ಮೇವಾಗಿ ಬಳಸುತ್ತಾರೆ. ಇದರಿಂದ ಹಸಿರು ಗೊಬ್ಬರವನ್ನು ತಯಾರಿಸುವುದುಂಟು. ಅಲ್ಲದೆ ಆವಿ ಆಸವೀಕರಣದಿಂದ ಹಳದಿ ಬಣ್ಣದ ಎಣ್ಣೆಯೊಂದನ್ನು ಪಡೆಯಲಾಗುತ್ತದೆ. ಈ ಎಣ್ಣೆಗೆ ಕ್ಷಯಕ್ರಿಮಿ ವಿರೋಧಿ ಗುಣ ಇದೆಯೆಂದು ಹೇಳಲಾಗಿದೆ.
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ